ಸಮತಳ, ಸೌತ್ಲ, ಸರಸ್ವತಿಪುರ
ಗ್ರಾಮದ ಹೆಸರು ಸಮತಳ, ಸೌತ್ಲ ಅಲ್ಲ.ಸರಸ್ವತಿಪುರವೆಂಬ ಹೆಸರು ಇದ್ದದ್ದು ತಿಳಿದು ಬರುತ್ತದೆ.
ಇದು ಭಾರತ ದೇಶದ, ಕರ್ನಾಟಕ ರಾಜ್ಯದ ಮಲೆನಾಡಿನ ಕಾಫಿ ಜಿಲ್ಲೆ ಎಂದು ಪ್ರಸಿದ್ಧವಾದ ಚಿಕ್ಕಮಗಳೂರು ಜಿಲ್ಲೆಯ, ತರೀಕೆರೆ ತಾಲೂಕಿನ ಐತಿಹಾಸಿಕ ಅಮೃತೇಶ್ವರ ದೇವಾಲಯವಿರುವ ಅಮೃತಾಪುರ ಹೋಬಳಿಯಲ್ಲಿದೆ.
ಇದು ಒಂದು ಪುಟ್ಟ ಗ್ರಾಮ.
ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ತಿಮ್ಮಪ್ಪನ ದೇವಸ್ಥಾನ, ಶ್ರೀ ಪತ್ರೆ ಮರದ ಸಿದ್ದೇಶ್ವರ ಗುಡಿಯಿದೆ. ಆಲದಮರದಮ್ಮ, ಬೇವಿನ ಮರದಮ್ಮ, ಸಂತೆ ದಿಬ್ಬದ ಅಮ್ಮ ನೆಲೆಸಿದ್ದಾರೆ.
ಪ್ರತಿ ವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ, ಇಲ್ಲಿ ನಡೆಯುವ ಜಾತ್ರೆಯು ವಿಶೇಷವಾಗಿದೆ. ಜಾತ್ರೆಗೆ ಮೊದಲು ದೇವರ ಕಲ್ಲತ್ತಿಗಿರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ನಂತರ ಆಯ್ದ ಕೆಲವರು ಮಾತ್ರ ಮೇಗಲ ಗಿರಿಗೆ ತೆರಳುತ್ತಾರೆ. ಮೇಗಲ ಗಿರಿಯ ದಾರಿಯು ದುರ್ಗಮವಾದುದಾಗಿದೆ. ಮೇಗಲಗಿರಿಯಲ್ಲಿ ನೆಲೆಸಿರುವ ಶ್ರೀ ವೀರಭದ್ರೇಶ್ವರ ದೇವರಿಗೆ ಪೂಜೆ ಮಾಡಲಾಗುತ್ತದೆ, ಪೂಜೆ ಸಲ್ಲಿಸಿ ಅಲ್ಲಿ ದೊರೆಯುವ ನೀರು ಮತ್ತು ದರ್ಭೆಯೊಂದಿಗೆ ಮತ್ತೆ ಕೆಳಗೆ ಬರುತ್ತಾರೆ.
ಮೇಗಲಗಿರಿಗೆ ತೆರಳಿದವರು ವಾಪಸ್ಸು ಬರುವುದರೊಳಗಾಗಿ ಅಡುಗೆ ಮಾಡಲಾಗುತ್ತದೆ. ಪ್ರಸಾದವನ್ನು ಸ್ವಾಮಿಗೆ ಅರ್ಪಿಸಲು ಎಲ್ಲಾ ತಯಾರಿ ನಡೆದಿರುತ್ತದೆ. ಮೇಗಲಗಿರಿಯಿಂದ ಬಂದ ನಂತರ ಕೆಳಗಡೆ ಶ್ರೀ ವೀರಭದ್ರ ಸ್ವಾಮಿಯ ದೇವಾಲಯದಲ್ಲಿ ಪೂಜೆ ನಡೆಯುತ್ತದೆ. ಪೂಜೆಯ ನಂತರದಲ್ಲಿ ನೂರೊಂದೆಡೆ ನಡೆಯುತ್ತದೆ. ಈ ಕಾರ್ಯಕ್ರಮವನ್ನು ನಡೆಸಿಕೊಡಲು ಪ್ರತ್ಯೇಕ ತಿರುಪತಿ ನಾಮ ಪಠಿಸುವವರನ್ನೂ ಕರೆತರಲಾಗುತ್ತದೆ.
ನೂರೊಂದೆಡೆಯ ನಂತರ ಅಮ್ಮನವರ ಆಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಗ್ರಾಮಕ್ಕೆ ವಾಪಸ್ಸು ಬರಲಾಗುತ್ತದೆ.
ಗ್ರಾಮದ ಸರಹದ್ದಿನಲ್ಲಿ ಮತ್ತೆ ಅಡುಗೆ ಮಾಡಿ ಕಾಲ್ನಡಿಗೆಯಲ್ಲಿ ಗ್ರಾಮಕ್ಕೆ ದೇವರುಗಳನ್ನು ತರಲಾಗುತ್ತದೆ.
ಶ್ರೀ ರಂಗನಾಥ ಸ್ವಾಮಿ ಮದುವೆ ಮತ್ತು ಮರುದಿನ ರಥೋತ್ಸವ ವಿರುತ್ತದೆ.
ರಥೋತ್ಸವದ ದಿನ ಹಾಗೂ ಮರುದಿನ ಶ್ರೀ ಸಿದ್ದೇಶ್ವರ ಸ್ವಾಮಿ ಆಲಯದಲ್ಲಿ ಊಟದ ವ್ಯವಸ್ಥೆಯಿರುತ್ತದೆ. ಇಲ್ಲಿ ಗಂಡಸರೇ ಅಡುಗೆ ಮಾಡುವುದು ವಿಶೇಷ. ನಂತರದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಯ ಗದ್ದುಗೆಗೆ ರುದ್ರಾಭಿಷೇಕ ನಡೆಯುವುದು.
ತಿಮ್ಮಪ್ಪ ಸ್ವಾಮಿಗೆ ಪ್ರಮುಖ ಬೀದಿಗಳಲ್ಲಿ ಓಕಳಿ ನಡೆಯುವುದು ನಂತರದಲ್ಲಿ ಮತ್ತೊಮ್ಮೆ ಸ್ನಾನ ಮಾಡಿಸಿ ಶ್ರೀ ಸಿದ್ದೇಶ್ವರ ಸ್ವಾಮಿಯ ಆಲಯಕ್ಕೆ ತರಲಾಗುವುದು. ನಂತರದಲ್ಲಿ ದೇವಸ್ಥಾನದ ಧ್ವಜವನ್ನು ಹರಾಜು ಹಾಕಲಾಗುವುದು.ಎಲ್ಲಾ ರಸ್ತೆಗಳಲ್ಲಿ ಗ್ರಾಮ ದೇವತೆಗಳ ಮೆರವಣಿಗೆಯನ್ನು ಟ್ರ್ಯಾಕ್ಟರ್‌ನಲ್ಲಿ ನಡೆಸಲಾಗುತ್ತದೆ.
ಗ್ರಾಮದಲ್ಲಿ ಅಡಿಕೆ, ತೆಂಗು, ಮಾವು, ಬಾಳೆ ಮುಖ್ಯ ವಾಣಿಜ್ಯ ಬೆಳೆಗಳಾಗಿವೆ. ಪಶುಸೋಗೋಪನೆಯು ವ್ಯಾಪಕವಾಗಿದೆ ಭತ್ತ, ರಾಗಿ, ಜೋಳ, ಉರುಳಿ ಯನ್ನು ಬೆಳೆಯುತ್ತಾರೆ.
ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿರುತ್ತದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೆರೆಯ ಕುಂಟಿನಮಡು, ನೇರಲಕೆರೆ ಗ್ರಾಮಗಳಿಗೆ ಹಾಗೂ ತರೀಕೆರೆ,ಭದ್ರಾವತಿ, ಶಿವಮೊಗ್ಗ, ಬೆಂಗಳೂರುಗಳಿಗೆ ಮತ್ತು ಇತರ ನಗರಗಳಿಗೆ ತೆರಳುತ್ತಾರೆ.
ಗ್ರಾಮಕ್ಕೆ ಶ್ರೀ ರಾಮೇಶ್ವರ ಮೋಟಾರ್ಸ, ಶ್ರೀ ಸಿದ್ದರಾಮೇಶ್ವರ ಮೋಟಾರ್ಸ, ಏ.ಜಿ.ಎಂ.ಎಸ್, ಸರ್ಕಾರಿ ಬಸ್ ಸೌಕರ್ಯವನ್ನು ನೀಡುತ್ತಿವೆ.
Comments