ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ


ಓಂ ಶ್ರೀ ಗುರು ಚನ್ನ ಬಸವವೇಶ್ವರ ಸ್ವಾಮಿ, ಶ್ರೀ ಗುರು ಬಸವೇಶ್ವರ ಸ್ವಾಮಿ, ಓಂ ಶ್ರೀ ಪತ್ರೆಕಲ್ಲು ಸಿದ್ದೇಶ್ವರ ಸ್ವಾಮಿ, ಶ್ರೀ ಮುದ್ರೆಕಲ್ಲೇಶ್ವರ ಸ್ವಾಮಿ , ಶ್ರೀ ಗುರು ಮೂಕಪ್ಪ ಶಿವಯೋಗಿ ಪ್ರಸೀದಃ


ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, 
ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ  
ಕಿರು ಪರಿಚಯ

                                “ಹಲವು ಮಾತೇನು ನೀನೊಲಿದು ಪಾದವನಿಟ್ಟ
                                   ನೆಲವೇ ಸುಕ್ಷೇತ್ರ/ಜಲವೇ ಪಾವನ ತೀರ್ಥ
                                   ಸುಲಭ ಶ್ರೀಗುರುವೇ ಕೃಪೆಯಾಗು”

       ಭಾರತ ಆಧ್ಯಾತ್ಮದ ತವರೂರು, ದಿವ್ಯ ಶಕ್ತಿಯ ಪುಣ್ಯಭೂಮಿ. ಅಂತಹ ದಿವ್ಯ ಪರಂಪರೆಯ ಸಾಲಿನಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕ ತಿಪ್ಪಾಯಿಕೊಪ್ಪ ಮೂಕಪ್ಪ ಶಿವಯೋಗಿಗಳ ಮಠವು ಒಂದು. ಮಹಾಮಹಿಮರಾದ ಮೂಕಪ್ಪ ಶಿವಯೋಗಿಗಳು ಪರಮ ವೈರಾಗಿಗಳು, ಲಿಂಗಲೀಲಾ ವಿಲಾಸಿಗಳು, ಪವಾಡಪುರುಷರು, ವಿಶ್ವಕಲ್ಯಾಣಕ್ಕೆ ಅಂತಃಶಕ್ತಿಯನ್ನು, ತಪಃಶಕ್ತಿಯನ್ನು ಅನುಗ್ರಹಗೈದವರು, ಮೌನದಿಂದಲೇ ಮಹದೇವನನ್ನು ಕಂಡವರು, ಮೌನಿಯಾಗಿ ತಪಗೈದು ಶಿವಯೋಗಿ ಸಿದ್ಧನೆನಿಸಿದವರು ಶ್ರೀ ಗುರು ಮೂಕಪ್ಪ ಶಿವಯೋಗಿಗಳು.

        ಇಂತಹ ಮಹಿಮರ ಶ್ರೀಮಠಕ್ಕೆ ಪೀಠಾಧಿಪತಿಗಳಾದವರು ಕಾಯಕ ಜೀವಿಗಳು, ಕ್ರೀಯಾಶೀಲ ವ್ಯಕ್ತಿತ್ವವುಳ್ಳ ಶ್ರೀ ಮ.ನಿ.ಪ್ರ ವಿರೂಪಾಕ್ಷಮಹಾ ಸ್ವಾಮಿಗಳು.

ಶ್ರೀಗಳ ಬಾಲ್ಯ
     ಪೂಜ್ಯ ವಿರೂಪಾಕ್ಷ ಶ್ರೀಗಳು ಹಾವೇರಿ ಜಿಲ್ಲಾ ಸವಣೂರು ತಾಲೂಕ, ಹಿರೇಮರಳಿಹಳ್ಳಿ ಎಂಬ ಕುಗ್ರಾಮದಲ್ಲಿ ದಿನಾಂಕ: 06/03/1951 ರಂದು ಪೂಜ್ಯಶ್ರೀ ಶಾಂತಮ್ಮ, ಶ್ರೀ ಸಣ್ಣಬಸಯ್ಯನವರ ಮಗನಾಗಿ ಜನಿಸಿದರು.

  ಶ್ರೀಗಳು ಪ್ರಾಥಮಿಕ ಶಿಕ್ಷಣವನ್ನು ಅಂದರೆ ಮೂರನೆಯ ತರಗತಿಯವರೆಗೆ ಚಿಕ್ಕಮರಳಹಳ್ಳಿಯಲ್ಲಿ ಪೂರೈಸಿ, ಬಡತನದ ವ್ಯವಸ್ಥೆಯಲ್ಲಿ ಶಿಕ್ಷಣ ಅಲ್ಲಿಗೆ ನಿಂತಿತು.ಬಾಲ್ಯದಲ್ಲಿ ಶ್ರೀಗಳ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಅದು ಮುಳ್ಳಿನ ಹಾಸಿಗೆ, ಬಡತನವನ್ನು ಉಂಡು ಬಡತನವನ್ನು ಹೊದ್ದ ಪರಿಸ್ಥಿತಿಯಲ್ಲಿ ಗೋವಾಕ್ಕೆ ಹೋಗಿ ಗಣಿಯಲ್ಲಿ ಅದಿರಿನ ಬುಟ್ಟಿಯನ್ನು ಹೊತ್ತು ಕೂಲಿ ಮಾಡಿ ಕುಟುಂಬ ಸಲುಹಿದರು. ಆದರೆ ಈ ಎಲ್ಲ ಕಷ್ಟಗಳ ಮಧ್ಯೆಯು ಆಧ್ಯಾತ್ಮದ ಅಧ್ಯಯನಕ್ಕಾಗಿ ಶ್ರೀಗಳ ಮನಸ್ಸು ಸದಾ ತುಡಿಯುತ್ತಿತ್ತು. ಆರಂಭದಲ್ಲಿ ಶಿರಸಿ ಬಣ್ಣದ ಮಠದ ಶ್ರೀ ಗುರುಸಿದ್ಧಮಹಾಸ್ವಾಮಿಗಳವರ ಸಂಪರ್ಕದಿಂದ ತತ್ವಚಿಂತನೆಗೆ ಒಳಗಾಗಿ ಪೂಜಾವಿಧಿವಿಧಾನಗಳನ್ನು ರೂಢಿಸಿಕೊಂಡರು. ಹಾವೇರಿ ಸಿಂಧಗಿ ಮಠದ ಒಡೆಯರಾಗಿದ್ದ ಶ್ರೀ.ಷ.ಬ್ರ ಶಾಂತವೀರಸ್ವಾಮಿಗಳಿಂದ ಲಿಂಗ ಧೀಕ್ಷಾ ಸಂಸ್ಕಾರ ಪಡೆದುಕೊಂಡರು ಬಾಲ್ಯದಲ್ಲಿಯೇ ಚಿಕ್ಕ ಮರಳಹಲ್ಲಿಯಲ್ಲಿ 41 ದಿನಗಳ ಮೌನಾನುಷ್ಠನಗೈದರು.

ಅಧ್ಯಯನ

         ಶಿರಸಿಯ ಬಣ್ಣದಮಠದ ಪೂಜ್ಯರು ಶ್ರೀ ವಿರೂಪಾಕ್ಷ ಸ್ವಾಮೀಜಿಯವರಲ್ಲಿ ಬಾಲ್ಯದಲ್ಲೆ ಅವರ ತೇಜಸ್ಸನ್ನು, ಸಂಸ್ಕಾರವನ್ನು ಗುರುತಿಸಿ ಉನ್ನತ ಧ್ಯಾತ್ಮ ಶಿಕ್ಷಣದ ಅಧ್ಯಯನಕ್ಕಾಗಿ ಬಾದಾಮಿಯ ಶಿವಯೋಗ ಮಂದಿರಕ್ಕೆ ಕಳುಹಿಸಿದರು. 
       
       ಶಿವಯೋಗಮಂದಿರದ ಪ್ರಭಾವಲಯಕ್ಕೆ ಒಳಗಾದ ಶ್ರೀಗಳು ಕುಮಾರ ಮಹಾಸ್ವಾಮಿಗಳವರ ದಿವ್ಯ ಪ್ರಕಾಶದಲ್ಲಿ ಆಧ್ಯಾತ್ಮ ವಿದ್ಯೆಯನ್ನು. ಶ್ರೀ ಮ.ನಿ.ಪ್ರ ಸದಾಶಿವಮಹಾಸ್ವಾಮಿಗಳು ಹಾಗೂ ಹುಬ್ಬಳ್ಳಿ ಹೊಸಮಠದ ಶಿವಬಸವ ಮಹಾಸ್ವಾಮಿಗಳಿಂದ ಪಡೆದುಕೊಂಡರು. 
       
       ನಂತರ ಶಿಕಾರಿಪುರದ ಬಳಿ ಇರುವ ಕಾಳೇನಹಳ್ಳಿ ಕಪ್ಪನಹಳ್ಳಿಯ ಶತಾಯುಷಿ ಶ್ರೀ ಮ.ನಿ.ಪ್ರ ರುದ್ರಮುನಿ ಮಹಾಸ್ವಾಮಿಗಳ ಸೇವಡೆಯನ್ನು ಎರಡು ವರ್ಷಗಳ ಕಾಲಗೈದರು.

ತಿಪ್ಪಾಯಿಕೊಪ್ಪಕ್ಕೆ ದಯಮಾಡಿಸಿದ್ದು 
     ಕಾಳೇನಹಳ್ಳಿಯ ಮಠದ ಶ್ರೀ ಮ ನಿ ಪ್ರ ರೇವಣಸಿದ್ಧ ಮಹಾಸ್ವಾಮಿಗಳ ಆತ್ಮೀಯತೆಯ ಫಲವಾಗಿ ಹಾಗೂ ಭಕ್ತರ ಅಪೇಕ್ಷೆಯ ಮೇರೆಗೆ ದಿನಾಂಕ: 18/05/1985 ರಂದು ತಿಪ್ಪಾಯಿಕೊಪ್ಪದ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದ ಉತ್ತರಾಧಿಕಾರಿಗಳಾದರು. “ಅರಲುಗೊಂಡ ಕೆರೆಗೆ ತೆರೆ ಹಾಯ್ದು ಬಂದಂತಾಯಿತು” ಎಂಬ ಮಾತಿನಂತೆ ಶಿವಯೋಗಿಗಳ ನಂತರ ಗುರುಗಳೇ ಇಲ್ಲದ ಮಠಕ್ಕೆ ಬಂದ ವಿರೂಪಾಕ್ಷ ಶ್ರೀಗಳನ್ನು ಸಂತಸ ತುಂಬಿದ ಭಕ್ತಿಯಿಂದ ಭಕ್ತರು ಬರಮಾಡಿಕೊಂಡರು.

      ಶ್ರೀ ಮ.ನಿ.ಪ್ರ ರುದ್ರಮುನಿ ಮಹಾಸ್ವಾಮಿಗಳಿಂದ ಚಿನ್ಮಯ ದೀಕ್ಷೆ ಪಡೆದುಕೊಂಡರು.

     ಶ್ರೀಮಠಕ್ಕೆ 1985ರಲ್ಲಿ ಶ್ರೀಗಳು ದಯಮಾಡಿಸಿದಾಗ ಹಳೆಯದಾದ ಪರದೇಶಿ ಮಲ್ಲಯ್ಯನ ಗುಡಿ ಹಾಗೂ ಮೂಕಪ್ಪ ಶಿವಯೋಗಿಗಳ ಗದ್ದುಗೆಯ ಮುಂದೆ 12 ತಗಡುಗಳು ಇದ್ದವು. ಯಾವುದೇ ಆಸ್ತಿಯಾಗಲಿ ಮೂಲಸೌಕರ್ಯಗಳಾಗಲಿ ಇರಲಿಲ್ಲ .ಅಂತಹ ಸ್ಥಿತಿಯಲ್ಲಿ ಮಠದ ಚುಕ್ಕಾಣಿ ಹಿಡಿದ ಶ್ರೀಗಳು ನಂತರದಲ್ಲಿ ಮಠದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿ ಮಠದ ಚಿತ್ರಣವನ್ನು ಬದಲಿಸಿದ್ದಾರೆ.

     ದಿ.20/02/1992 ರಲ್ಲಿ ಲಿಂಗನಾಯಕನಹಳ್ಳಿಯ ಶ್ರೀ ಮ ನಿ ಪ್ರ ಚನ್ನವೀರಸ್ವಾಮಿಗಳಿಂದ ಷಟಸ್ಥಳ ಬ್ರಹ್ಮೋಪದೇಶ ಹಾಗೂ ನಿರಾಭಾರಿ ಚರಪಟ್ಟಾಧಿಕಾರವನ್ನು ಪಡೆದುಕೊಂಡರು.

ಶ್ರೀ ಮಠದ ಅಭಿವೃದ್ದಿಯ ನಾಗಾಲೋಟ
    ಶೂನ್ಯದಿಂದ ಪ್ರಾರಂಭವಾದ ಶ್ರೀಗಳ ಸಾಧನೆ ಇಂದು ಬೃಹತ್ತಾದ ಕಟ್ಟಡಗಳು, ಮನಸ್ಸಿಗೆ ಮುದ ನೀಡುವ ವಾತಾವರಣ ಕಲ್ಪಿಸಿಕೊಟ್ಟ ಶ್ರೇಯಸ್ಸು ವಿರೂಪಾಕ್ಷ ಶ್ರೀಗಳಿಗೆ ಸಲ್ಲುತ್ತದೆ.

ಗದ್ದುಗೆ ಕಟ್ಟಡ: ಕರ್ತೃ ಮೂಕಪ್ಪ ಶಿವಯೋಗಿಗಳ ಗದ್ದುಗೆ ಕಟ್ಟಡ 75 ಅಡಿ ಉದ್ದ 65 ಅಡಿ ಅಗಲವಾಗಿದ್ದು, 35 ಅಡಿ ಎತ್ತರದ ಗೋಪುರ ನಿರ್ಮಿಸಲಾಗಿದೆ.

ವಸತಿ ಸಮುಚ್ಚಯ: ಶ್ರೀಗಳಿಗೆ ಹಾಗೂ ಭಕ್ತರ ವಾಸ್ತವ್ಯಕ್ಕೆ ವಸತಿ ಗೃಹವನ್ನು 82 ಅಡಿ ಉದ್ದ 85 ಅಡಿ ಅಗಲದ ವಿಸ್ತಾರದ ಮಂಟಪ  ನಿರ್ಮಿಸಿದ್ದಾರೆ.

ಕಲ್ಯಾಣ ಮಂಟಪ: ಕಾರ್ಯಕ್ರಮಗಳು, ಮದುವೆ ಮುಂತಾದ ಸಮಾರಂಭಗಳಿಗಾಗಿ 82 ಅಡಿ ಉದ್ದ 85 ಅಡಿ ಅಗಲದ ವಿಸ್ತಾರವುಳ್ಳ ಮಂಟಪ ನಿರ್ಮಿಸಿದ್ದಾರೆ.

ರಕ್ಷಣಾ ಗೋಡೆ: ಸುಮಾರು 450ಅಡಿ ಉದ್ದ ನದಿಯಿಂದ 25 ಅಡಿ  ಎತ್ತರ ಗೋಡೆಯನ್ನು ಮಠದ ಸುತ್ತಲು ನಿರ್ಮಿಸಿ ಎಂತಹ ಪ್ರವಾಹ ಬಂದರು ಮಠಕ್ಕೆ ತೊಂದರೆ ಆಗದಂತೆ ನಿರ್ಮಾಣ ಮಾಡಿದ್ದಾರೆ.

ಕಾಂಕ್ರೀಟ್ ಹಾಸಿಗೆ:ರಕ್ಷಣಾ ಗೋಡೆಯಿಂದ ನದಿಯವರೆಗೆ 99 ಅಡಿ ಅಗಲ 33 ಅಡಿ ಉದ್ದದ ಕಾಂಕ್ರಿಟ್ ಹಾಸಿಗೆಯನ್ನು ನಿರ್ಮಿಸಿದ್ದಾರೆ.

ದಾಸೋಹ ಭವನ: 70 ಅಡಿ ಉದ್ದ , 33 ಅಡಿ ಅಗಲದ ದಾಸೋಹ ಮಂದಿರ ಹಾಗೂ ನಿತ್ಯ ದಾಸೋಹಕ್ಕಾಗಿ 55 ಅಡಿ ಉದ್ದ 22 ಅಡಿ ಅಗಲದ ಸೌದೆ ಒಲೆಯ ಮನೆಯನ್ನು ಕಟ್ಟಲಾಗಿದೆ.
ಹತ್ತಾರು ಕೋಟಿ ಮೌಲ್ಯವುಳ್ಳ  ಎಲ್ಲಾ ಕಟ್ಟಡಗಳು ಶ್ರೀಗಳ ನಿರಂತರ ಪರಿಶ್ರಮದ ಫಲವಾಗಿದೆ.

ಚಟುವಟಿಕೆಗಳು: ಶ್ರೀ ಮಠದಲ್ಲಿ ನಿತ್ಯ ದಾಸೋಹ ತತ್ವ ಕೈಂಕರ್ಯ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಕಾಲದಿಂದಲೂ ನಿರಂತರ ನಡೆಯುತ್ತಾ ಬಂದಿದೆ. ವಿರೂಪಾಕ್ಷ ಶ್ರೀಗಳ ಸಂಕಲ್ಪ ಸಿದ್ಧಿಯಿಂದ ಶ್ರೀಮಠಕ್ಕೆ ಯಾರೆ ಬರಲಿ ಪ್ರಸಾದ ಪ್ರಾಪ್ತಿಯಾಗಲೇಬೇಕು.

      “ಬಸವಾದಿ ಪ್ರಮಥರಾಚಾರವಿಡಿದು ಭವದೂರನಾಗಿ ಪಾರಮಾರ್ಥದಲ್ಲಿರುವವಗೆ ಆರಗೊಡವೆ ಇನ್ನೇನು?” ಎಂದು, ಗ್ರಾಮಗಳೆಡೆಗೆ ಆಧ್ಯಾತ್ಮದ ನಡಿಗೆ ಎಂಬ ಧ್ಯೇಯದೊಂದಿಗೆ ಹಳ್ಳಿಯಿಂದ ಹಳ್ಳಿಗೆ ಸಂಚಾರಿ ಶಿವಾನುಭವ ಮಾಡಿ ಮರಹಿನಲ್ಲಿ ಮೈಮರೆತ ಜನತೆಗೆ ಎಚ್ಚರಿಸುತ್ತಾ ಆಧ್ಯಾತ್ಮದ ಚಿರ ಬೆಳಕು ಬೀರಿದವರು ಶ್ರೀಗಳು. ಅಷ್ಟೆ ಅಲ್ಲ ನಿರ್ಗತಿಕರ, ನೊಂದವರ ಪಾಲಿನ ಸಂಜೀವಿನಿ, ಮಾರ್ಗದರ್ಶಕರಾಗಿ ಎಲ್ಲರೊಡನೆ ಒಂದಾಗಿ ಹುಲುಜನರ ಮನದ ಕಲ್ಮಷಗಳನ್ನು ತೊಳೆಯುತ್ತಿರುವವರು ಶ್ರೀ ವಿರೂಪಾಕ್ಷ ಮಹಾಸ್ವಾಮೀಜಿಯವರು.

        ಕಾಲಕಾಲಕ್ಕೆ ಆಧ್ಯಾತ್ಮಕ ಪ್ರವಚನಗಳನ್ನು ನಡೆಸುತ್ತಾ ಬಂದಿದ್ದಾರೆ. ಸಾಂಸ್ಕೃತಿ ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸುವುದರ ಜೊತೆಗೆ ರೈತ ಚಿಂತನಾ ಗೋಷ್ಠಿ, ಮಹಿಳಾ ಗೋಷ್ಠಿ ಸಾಹಿತ್ಯ ಗೋಷ್ಠಿಗಳನ್ನು ಕೈಗೊಂಡಿರುವುದು ಪೂಜ್ಯರಿಗಿರುವ ಸಾಮಾಜಿಕ ಕಾಳಜಿಯ ಪ್ರತೀಕ, ರೋಗ್ಯ ಶಿಬಿರ, ಯೋಗ ಶಿಬಿರ, ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಆಯೋಜಿಸಿ ಸಾಮಾಜಿಕ ಆರೋಗ್ಯದ ಬದ್ಧತೆ ಮೆರೆದಿದ್ದಾರೆ.

         ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಜೀವನ ಚರಿತ್ರೆ ಶ್ರೀ ಮ ನಿ ಪ್ರ ವಿರೂಪಾಕ್ಷ ಮಹಾಸ್ವಾಮಿಗಳ ಜೀವಾನಾಮೃತ, ಅಭಿವಂದನಾ ಗ್ರಂಥಗಳನ್ನು ಪ್ರಕಟಿಸುವ ಮೂಲಕ ಪುಸ್ತಕ ಪ್ರಕಾಶನದಲ್ಲೂ ಒಲವುಳ್ಳವರಾಗಿದ್ದಾರೆ. ಇನ್ನೂ ಅನೇಕ ನಾಡಿನ ಮಹಿಮರ ಕುರಿತಾದ ಪುಸ್ತಕಗಳನ್ನು ಹೊರತರುವ ಚಿಂತನೆ ಪೂಜ್ಯ ಶ್ರೀಗಳದ್ದು.

ಶಾಖಾ ಮಠ:
ಚಿಕ್ಕಮರಳಿಹಳ್ಳಿ ಶಾಖಾ ಮಠ: ಸವಣೂರು ತಾಲುಕ ಚಿಕ್ಕಮರಳಿಹಳ್ಳಿ ಶ್ರೀಗಳ ಜನ್ಮಸ್ಥಳ, ಅವರು ಬಾಲ್ಯದಲ್ಲಿ ಅನುಷ್ಠನಗೈದ ಜಾಗದಲ್ಲಿ ಶ್ರೀಗುರು ಮೂಕಪ್ಪ ಶಿವಯೋಗಿ ಶಾಖಾ ಮಠ ಸ್ಥಾಪಿಸಿ ಕಟ್ಟಡದ ಕಾರ್ಯವು ಸಾಂಗವಾಗಿ ನಡೆಯುತ್ತಿದೆ.

ಹತ್ತಿಮರಡಿ: ಶಿಕಾರಿಪುರಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಮದಗನ ಕೆರೆಯ ಹತ್ತಿರದಲ್ಲಿದೆ. ಕೋಡಮಗ್ಗಿ ಬಳಿಇರುವ ಪತ್ರಿಮರಡಿಯು ಶ್ರೀ ಗುರು ಮೂಕಪ್ಪ ಶಿವಯೋಗಿಗಳು ತಪಗೈದ ತಾಣ, ಹೆಸರಿಗೆ ತಕ್ಕಂತೆ ಅಕ್ಷರಶಃ ಪತ್ರಿಮರಗಳು ಯಥೇಚ್ಚವಾಗಿವೆ. ನೂರಾರು ವರ್ಷಗಳ ಬೃಹತ್ತಾದ ಪಿಳಲಿ ಮರವು ಮನಸ್ಸಿಗೆ ಮುದವನ್ನು ನೀಡುತ್ತವೆ.4 ಎಕರೆ 14 ಗುಂಟೆ ಇರುವ ಜಾಗದಲ್ಲಿ ಶ್ರೀಮೂಕಪ್ಪಶಿವಯೋಗಿಗಳ ಕಾಲದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಚೌಡವ್ವ ಪ್ರತಿಷ್ಠಾಪನೆ ಗೊಂಡಿದ್ದಾರೆ. ಈ ಕ್ಷೇತ್ರದಲ್ಲಿ ವನಸ್ಪತಿವನ – ನಕ್ಷತ್ರ ವನ,ನವಗ್ರಹವನ ಹಾಗೂ ಗೋಶಾಲೆ ನಿರ್ಮಾಣ ಮಾಡುವ ಸಂಕಲ್ಪ ಪೂಜ್ಯ ಶ್ರೀಗಳದ್ದು.
ಈ ಎಲ್ಲ ಸಾಧನೆಯನ್ನು ಮಾಡಿದ್ದು ಶ್ರೀಗಳ ಅವಿರತ ಪರಿಶ್ರಮ, ತ್ರಿಕಾಲ ಪೂಜಾಫಲವಾಗಿದ್ದು ಜೊತೆಗೆ ಕರ್ತೃ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಕೃಪೆಯಿಂದ
              ಆಧ್ಯಾತ್ಮ ಮಾರ್ಗದರ್ಶಕರೂ, ತ್ರಿಕಾಲ ಪೂಜಾನಿಷ್ಠರೂ, ನಮ್ಮೆಲ್ಲರ ಪ್ರೀತಿಯ ಜನಾನುರಾಗಿ ಗುರುಗಳಾದ ಶ್ರೀ.ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳವರು ಸಮಾಜಕ್ಕಾಗಿ ಶ್ರೀಮಠದ ಅಭಿವೃದ್ಧಿಗಾಗಿ ತಮ್ಮನ್ನು ಗಂಧದ ಕೊರಡಿನಂತೆ ತೇದು ಸಮಾಜಕ್ಕೆ ಸುಗಂಧದ ಪರಿಮಳ ಬೀರಿದ್ದಾರೆ. ಇಂತಹ ಸಮಾಜ ಸೇವಾ ಸ್ವಾಮಿಕಿಯವರಿಗೆ ಭಕ್ತಮನದ ಅನಂತ ನಮನ.
-ಲೇಖಕರು- ಸಿದ್ದಯ್ಯ ಪ್ರಭಯ್ಯ . ವಿರಕ್ತಮಠ, ತಿಪ್ಪಾಯಿಕೊಪ್ಪ

ವಿಳಾಸ:
ಶ್ರೀ ಮ ನಿ ಪ್ರ ವಿರೂಪಾಕ್ಷ ಮಹಾಸ್ವಾಮಿಗಳು
ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ
ಜಂಗಮಕ್ಷೇತ್ರ, ತಿಪ್ಪಾಯಿಕೊಪ್ಪ ,
ಹಿರೇಕೆರೂರು ತಾಲೂಕ, ಹಾವೇರಿ ಜಿಲ್ಲೆ ,ಮಾಸೂರು- 581210
ಮೊಬೈಲ್:- 9108270099/9164667955



Comments

Popular posts from this blog

ವೀರಶೈವ ಪಂಚ ಪೀಠಗಳು

Sri Jagadguru 1008 Ujjaini Shrigalu @ Abbe tumkur fair - veerashaiva