Alma -Ata Declaration Kannada Transalation, ಅಲ್ಮ ಅಟಾ ಘೋಷಣೆ
ಓಂ ಶ್ರೀ ಗಣೇಶಾಯ ನಮಃ
ಅಲ್ಮ ಅಟಾ ಘೋಷಣೆ
ಪ್ರಾಥಮಿಕ ಆರೊಗ್ಯ ಆರೈಕೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ,
ಅಲ್ಮ ಅಟಾ, ಯು.ಎಸ್.ಎಸ್.ಆರ್. ದಿನಾಂಕ: 06-12 ಸೆಪ್ಟೆಂಬರ್-1978
ಪ್ರಾಥಮಿಕ ಆರೋಗ್ಯ ಆರೈಕೆ ಕುರಿತು 1978 ನೇ ಇಸವಿ ಸೆಪ್ಟೆಂಬರ್ ಮಾಹೆಯ 12 ನೇ ದಿನ ಯು.ಎಸ್.ಎಸ್.ಆರ್ನ ಅಲ್ಮ ಅಟಾದಲ್ಲಿ ನಡೆದ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಎಲ್ಲ ಸರ್ಕಾರಗಳು, ಎಲ್ಲ ಆರೋಗ್ಯ ಮತ್ತು ಅಭಿವೃದ್ಧಿ ಕಾರ್ಯಕರ್ತರು ಹಾಗೂ ವಿಶ್ವಸಮುದಾಯವು ವಿಶ್ವದ ಜನರ ಆರೋಗ್ಯ ರಕ್ಷಿಸಲು ಮತ್ತು ಪ್ರೋತ್ಸಾಹಿಸಲು ತುರ್ತಾಗಿ ಕ್ರಮ ಕೈಗೊಳ್ಳುವ ಅಭಿಪ್ರಾಯವನ್ನು ಪಡಲಾಯಿತು.
ಈ ಕೆಳಕಾಣಿಸಿದ ಘೋಷಣೆಗಳನ್ನು ಮಾಡಲಾಗಿದೆ.
1.
ಆರೋಗ್ಯವು ಕೇವಲ ರೋಗ ಅಥವಾ ದೌರ್ಬಲ್ಯದ ಅನುಪಸ್ಥಿತಿಯಲ್ಲ. ಇದು ಸಂಪೂರ್ಣ ಭೌತಿಕ ,ಮಾನಸಿಕ ಹಾಗೂ ಸಾಮಾಜಿಕ ಯೋಗಕ್ಷೇಮವಾಗಿದೆ. ಇದು ಮಾನವನ ಮೂಲಭೂತ ಹಕ್ಕಾಗಿದ್ದು, ವಿಶ್ವದಾದ್ಯಂತ ಉತ್ಕೃಷ್ಠ ಮಟ್ಟದ ಆರೋಗ್ಯ ಮಟ್ಟವನ್ನು ಸಾಧಿಸುವುದು ಸಾಮಾಜಿಕ, ಆರ್ಥೀಕ ವಲಯದ ಕ್ರಮಗಳ ಮೇಲೆ ಅವಲಂಭಿತವಾಗಿದೆ ಎಂದು ಈ ಸಮ್ಮೇಳನವು ಬಲವಾಗಿ ಪುನರುಚ್ಚರಿಸುತ್ತದೆ.
2.
ಅಭಿವೃದ್ದಿ ಹೊಂದಿದ ಮತ್ತು ವಿಶೇಷವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಆರೋಗ್ಯ ಮಟ್ಟದಲ್ಲಿ ಗಾಢವಾಗಿ ಅಸಮಾನತೆ ಇದೆ. ಇದನ್ನು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಒಪ್ಪಿಕೊಳ್ಳಲಾಗದು, ಆದುದರಿಂದ ಇದು ಎಲ್ಲ ದೇಶಗಳನ್ನು ಸಾಮಾನ್ಯವಾಗಿ ಭಾಧಿಸುತ್ತಿರುವ ವಿಷಯವಾಗಿರುವ ಕಾರಣ ಎಲ್ಲ ದೇಶಗಳು ಚಿಂತಿಸಬೇಕಾದ ಹಾಗೂ ಕಾಳಜಿವಹಿಸಬೇಕಾದ ವಿಷಯವಾಗಿದೆ.
3.
ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಯನ್ನು ಹೊಸ ಅಂತರರಾಷ್ಟ್ರೀಯ ಆರ್ಥೀಕ ಕ್ರಮದ ಪ್ರಕಾರ ಹೊಂದುವುದು, ಅಭಿವೃದ್ದಿ ಹೊಂದಿದ ಮತ್ತು ವಿಶೇಷವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿಯ ಆರೋಗ್ಯ ಅಸಮಾನತೆಯನ್ನು ಕಡಿಮೆಮಾಡುವಲ್ಲಿ ಹಾಗೂ ಎಲ್ಲರಿಗೂ ಎಲ್ಲೆಡೆಯು ಪೂರ್ಣ ಪ್ರಮಾಣದ ಆರೋಗ್ಯವನ್ನು ಸಾಧಿಸುವಲ್ಲಿ ಮೂಲಭೂತವಾಗಿದೆ. ನಿರಂತರ ಆರ್ಥಿಕ, ಸಾಮಾಜಿಕ ಅಭಿವೃಧ್ಧಿಗೆ ಜನರ ಆರೋಗ್ಯವನ್ನು ಉತ್ತೇಜಿಸುವುದು, ಸಂರಕ್ಷಿಸುವುದು ಅವಶ್ಯವಾಗಿದೆ. ಹಾಗೂ ಇದು ಒಳ್ಳೆಯ ಜೀವನಪದ್ದತಿ ರೂಪಿಸಲು ಮತ್ತು ಜಾಗತಿಕ ಶಾಂತಿಗೆ ಕೊಡುಗೆಯನ್ನು ನೀಡುತ್ತದೆ.
4.
ಜನರು ಪ್ರತ್ಯೇಕವಾಗೀ ಅಥವಾ ಒಟ್ಟಾಗಿ ಆರೊಗ್ಯ ಆರೈಕೆಯ ಯೋಜನೆ ಮತ್ತು ಅನುಷ್ಠಾನದಲ್ಲಿ ಭಾಗವಹಿಸುವ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿರುತ್ತಾರೆ.
5.
ಜನರ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ. ಸದರಿ ಜವಾಬ್ದಾರಿಗಳನ್ನು ಪೂರ್ಣವಾಗಿ ಸಾಧಿಸಲು ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳ ಪೂರ್ವ ಸಿದ್ಧತೆಯ ಅವಶ್ಯವಿರುತ್ತದೆ. ಮುಂಬರುವ ದಶಮಾನಗಳಲ್ಲಿ ಸರ್ಕಾರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು, ಮತ್ತು ಪೂರ್ಣ ವಿಶ್ವ ಸಮುದಾಯದ ಮುಖ್ಯವಾದ ಸಾಮಾಜಿಕ ಗುರಿ 2000 ಇಸವಿಯ ವೇಳೆಗೆ ವಿಶ್ವದ ಎಲ್ಲ ಜನರಿಗೂ ಒಂದು ಹಂತದ ಉತ್ತಮ ಆರೋಗ್ಯ ಪ್ರಾಪ್ತವಾಗಬೇಕು ಎಂಬುದಾಗಿದೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಉತ್ಪನ್ನಯುಕ್ತ ಜೀವನ ನಡೆಸಲು ಅನುಕೂಲ ಮಾಡಿಕೊಡುವ ಒಂದು ಹಂತದ ಆರೋಗ್ಯ ಸಾಧನೆ ಪ್ರಾಥಮಿಕ ಆರೋಗ್ಯ ಆರೈಕೆಯ ಗುರಿಯಾಗಿದೆ. ಈ ಗುರಿಯನ್ನು ಸಾಧಿಸುವುದು ಅಭಿವೃದ್ದಿಯ ಭಾಗವಾಗಿದೆ ಹಾಗೂ ಇದು ಸಾಮಾಜಿಕ ನ್ಯಾಯದ ಚೈತನ್ಯವಾಗಿದೆ.
6.
ಪ್ರಾಥಮಿಕ ಆರೋಗ್ಯ ಆರೈಕೆಯು ಅತ್ಯವಶ್ಯಕ ಆರೋಗ್ಯ ಆರೈಕೆಯಾಗಿದ್ದು ಇದು ಪ್ರಾಯೋಗಿಕ, ವೈಜ್ಞಾನಿಕ ದೃಢ ಅಭಿಪ್ರಾಯಹೊಂದಿದ್ದು ಸಾಮಾಜಿಕವಾಗಿ ಸ್ವೀಕಾರಾರ್ಹ ವಿಧಾನ, ತಂತ್ರಜ್ಞಾನಗಳನ್ನು ಸಾರ್ವತ್ರಿಕವಾಗಿ ಸುಲಭ ಸಾದ್ಯವಾಗಿ ಪ್ರತಿಯೋರ್ವರಿಗು ಮತ್ತು ಸಮುದಾಯಕ್ಕೆ ತಲುಪಿಸಲು ಆರ್ಹವಾಗಿದೆ. ಇದನ್ನು ಸಮುದಾಯ ಹಾಗೂ ಪ್ರತಿಯೋರ್ವರ ಪಾಲ್ಗೊಳ್ಳುವಿಕೆಯಿಂದ ಸಾಧಿಸಬಹುದಾಗಿದೆ. ಪ್ರಾಥಮಿಕ ಆರೋಗ್ಯ ಆರೈಕೆಯನ್ನು ದೇಶದ ಸ್ವಾವಲಂಭನೆ ಮತ್ತು ಸ್ವಯಂಪೂರ್ಣದ ಹಕ್ಕು ಸ್ಥಾಪಿಸುವ ದಿಕ್ಕಿನಲ್ಲಿ ಸಮುದಾಯ ಹಾಗೂ ದೇಶ ಭರಿಸಬಹುದಾದ ಖರ್ಚಿನಲ್ಲಿ ಪ್ರತಿ ಹಂತದಲ್ಲಿಯ ಅಭಿವೃದ್ದಿಗೆ ಭರಿಸಬಹುದಾಗಿದೆ. ಇದು ದೇಶದ ಆರೋಗ್ಯ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿದ್ದು , ವ್ಯವಸ್ಥೆಯ ಕೇಂದ್ರ ಬಿಂದುವಾಗಿರುವುದರ ಜೊತೆಗೆ ದೇಶದ ಮುಖ್ಯವಾದ ಕೆಲಸವಾಗಿರುವುದು. ಇದು ದೇಶದ ಆರೋಗ್ಯ ವ್ಯವಸ್ಥೆಯೊಂದಿಗೆ ವೈಯುಕ್ತಿಕವಾಗಿ ಮತ್ತು ಕುಟುಂಬವನ್ನು ಸಂಪರ್ಕಿಸುವ ಮೊದಲ ಹಂತವಾಗಿದೆ. ಇದು ಆರೊಗ್ಯವನ್ನು ಸಾಧ್ಯವಾದಷ್ಟು ಜನರು ವಾಸಿಸುವ ಕಡೆ, ಜನರು ಕೆಲಸ ನಿರ್ವಹಿಸುವ ಸಮೀಪ ತರಲು ಯತ್ನಿಸುತ್ತದೆ. ಇದು ನಿರಂತರ ಆರೋಗ್ಯ ಆರೈಕೆ ಪ್ರಕ್ರಿಯೆಯ ಮೊದಲ ಅಂಶವಾಗಿದೆ.
7.
ಪ್ರಾಥಮಿಕ ಆರೋಗ್ಯ ರಕ್ಷಣೆ:
a. ಇದು ದೇಶದ ಹಾಗೂ ದೇಶದ ಸಮುದಾಯಗಳ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸಾಂಸ್ಕೃತಿಕ ಹಾಗೂ ರಾಜಕೀಯ ಗುಣಲಕ್ಷಣಗಳ ಜೊತೆಗೆ ವಿಕಸಿತವಾಗುವುದು ಮತ್ತು ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸಾಂಸ್ಕೃತಿಕ ಹಾಗೂ ರಾಜಕೀಯ ಗುಣಲಕ್ಷಣಗಳನ್ನು ಪ್ರತಿಫಲಿಸುತ್ತದೆ. ಇದು ಸಾಮಾಜಿಕ , ಜೀವ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ಸಂಶೋಧನೆ, ಸಾರ್ವಜನಿಕ ಆರೋಗ್ಯ ಅನುಭವಗಳ ಸಮಂಜಸವಾದ ಫಲಿತಾಂಶಗಳ ಅನ್ವಯಿಸುವಿಕೆಯ ಮೇಲೆ ನಿರ್ಭರವಾಗಿರುತ್ತದೆ.
b. ಇದು ಸಮುದಾಯದಲ್ಲಿರುವ ಮುಖ್ಯವಾದ ಆರೋಗ್ಯ ಸಮಸ್ಯೆಗಳನ್ನು Promotive, Preventive,Curative,
rehabilitative – ತಡೆಗಟ್ಟುವ, ಶುಶ್ರೂಷ, ಮತ್ತು ಪುನರ್ವಸತಿ ಸೇವೆಗಳನ್ನು” ನೀಡುವ ಪ್ರಕಾರ ಸಂಭೋದಿಸುತ್ತದೆ.
c. ಪ್ರಸ್ತುತ ಇರುವ ಆರೋಗ್ಯ ಸಂಬಂಧಿ ತೊಂದರೆಗಳ ಕುರಿತು ಇರುವ ತಿಳುವಳಿಕೆ ಮತ್ತು ಅವುಗಳನ್ನು ತಡೆಗಟ್ಟುವ ಮತ್ತು ಶುಶ್ರೂಷೆ ನೀಡುವ ವಿದ್ಯೆ, ಆಹಾರ ಪೂರೈಕೆ, ಮತ್ತು ಶುದ್ಧ ಕುಡಿಯುವ ನೀರು, ಮೂಲಭೂತ ನೈರ್ಮಲ್ಯ,ತಾಯಿ ಮಗುವಿನ ಆರೈಕೆ, ಕುಟುಂಬ ಕಲ್ಯಾಣ , ಸಾಂಕ್ರಾಮಿಕ ರೋಗಗಳ ವಿರುದ್ದ ಲಸಿಕೆ, ಪ್ರಾಂತೀಯ Endemic disease ಗಳ ತಡೆಗಟ್ಟುವಿಕೆ ಮತ್ತು ಹತೋಟಿ , ಸಾಮಾನ್ಯ ಖಾಯಿಲೆ ಮತ್ತು ಗಾಯದ ಸೂಕ್ತ ಚಿಕಿತ್ಸೆ, ಅವಶ್ಯ ಔಷಧಿಗಳ ಸರಬರಾಜನ್ನು ಇದು ಒಳಗೊಂಡಿರುತ್ತದೆ.
d. ಆರೋಗ್ಯ ವಲಯದ ಜೊತೆಗೆ ಎಲ್ಲ ಸಂಬಂಧಿತ ಕ್ಷೇತ್ರಗಳ ರಾಷ್ಟ್ರೀಯ ಮತ್ತು ಸಮುದಾಯದ ಅಭಿವೃದ್ದಿಯ ಅಂಶಗಳನ್ನು ಒಳಗೊಂಡಿದ್ದು, ನಿರ್ದಿಷ್ಟವಾಗಿ ಕೃಷಿ, ಪಶುಸಂಗೋಪನೆ, ಆಹಾರ, ಉದ್ಯಮ, ಶಿಕ್ಷಣ, ವಸತಿ,ಲೋಕೋಪಯೋಗಿ ಕಾಮಗಾರಿಗಳು, ಸಂವಹನ ಮತ್ತು ಇತರೆ ಕ್ಷೇತ್ರಗಳ ಹಾಗೂ ಎಲ್ಲ ಕ್ಷೇತ್ರಗಳ ಸಂಘಟಿತ ಪ್ರಯತ್ನಗಳ ಸಹಕಾರವನ್ನು ಇದು ಕೋರುತ್ತದೆ.
e. ಈ ಹಂತದಲ್ಲಿ ಸೂಕ್ತ ಅವಶ್ಯ ಶಿಕ್ಷಣದ ಮೂಲಕ ಸಮುದಾಯಗಳ ಸಾಮರ್ಥ್ಯವನ್ನು ಅಭಿವೃದ್ದಿಗೊಳಿಸಿ ಪಾಲ್ಗೊಳ್ಳುವಂತೆ ಮಾಡುವುದು, ಲಭ್ಯವಿರುವ ಸ್ಥಳೀಯ, ರಾಷ್ಟ್ರೀಯ ಮತ್ತು ಇತರೆ ಲಭ್ಯವಿರುವ ಸಂಪನ್ಮೂಲಗಲ ಬಳಕೆಯಿಂದ ಯೋಜನೆ, ಸಂಘಟನೆ, ಕಾರ್ಯಚರಣೆ ಮತ್ತು ಪ್ರಾಥಮಿಕ ಆರೋಗ್ಯ ಆರೈಕೆಯ ನಿಯಂತ್ರಣದಲ್ಲಿ ವೈಯುಕ್ತಿಕ ಸ್ವಾವಲಂಬನೆ ಉತ್ತೇಜಿಸುವ ಅವಶ್ಯವಿದೆ.
f. ಸಮಗ್ರ, ಕ್ರಿಯಾತ್ಮಕ ಮತ್ತು ಪರಸ್ಪರ ಬೆಂಬಲಿತ referral ವ್ಯವಸ್ಥೆಯ ಮೂಲಕ ಸಮರ್ಥಿಸಿಕೊಳ್ಳಬೇಕು ಇದು ಸಮಗ್ರ ಆರೋಗ್ಯ ಆರೈಕೆಯ ಪ್ರಗತಿಶೀಲ ಸುಧಾರಣೆಗೆ ಕಾರಣವಾಗುತ್ತದೆ. ಮತ್ತು ಇದು ಅವಶ್ಯವಿರುವವರಿಗೆ ಮೊದಲು ಮತ್ತು ಹೆಚ್ಚು ಆದ್ಯತೆಯನ್ನು ನೀಡಬೇಕು.
g. ಸಾಮಾಜಿಕವಾಗಿ ಮತ್ತು ತಾಂತ್ರಿಕವಾಗಿ ಸಮುದಾಯ ಆರೋಗ್ಯ ಬೇಡಿಕೆಗಳಿಗೆ ಸ್ಪಂದಿಸಲು ಆರೋಗ್ಯ ತಂಡವಾಗಿ ಕೆಲಸ ನಿರ್ವಹಿಸಲು ಸ್ಥಳೀಯ ಮತ್ತು referral ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಅಂದರೆ , ವೈದ್ಯರು, ಶುಶ್ರೂಷಕಿಯರು, ಆರೋಗ್ಯ ಸಹಾಯಕರು, ದಾದಿಯರು, ಮತ್ತು ಸಮುದಾಯದಲ್ಲಿ ಕೆಲಸ ನಿರ್ವಹಿಸುತ್ತಿರುವವರ ಹಾಗೂ ಸಾಂಪ್ರಾದಯಿಕ ಆರೋಗ್ಯ ಪದ್ದತಿಯನ್ನು ಅಭ್ಯಸಿಸುತ್ತಿರುವವರ ಮೇಲೆ ಅವಲಂಭಿತವಾಗಿದೆ.
8.
ಎಲ್ಲ ಸರ್ಕಾರಗಳು ಇತರೆ ವಲಯಗಳ ಸಹಯೋಗದಲ್ಲಿ ಪ್ರಾಥಮಿಕ ಆರೋಗ್ಯ ಆರೈಕೆ ಕುರಿತು ವ್ಯಾಪಕ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯ ಭಾಗವಾಗಿ ಪ್ರಾಥಮಿಕ ಆರೋಗ್ಯ ರಕ್ಷಣೆ ಕುರಿತು ರಾಷ್ಟ್ರೀಯ ನೀತಿಗಳು, ತಂತ್ರಗಳು, ಮತ್ತು ನಿರಂತರ ಕ್ರಮ ಕೈಗೊಳ್ಳಲು ಕಾರ್ಯ ಯೋಜನೆಗಳನ್ನು ಪ್ರಾರಂಭಿಸಬೇಕು ಮತ್ತು ರೂಪಿಸಬೇಕು. ಇದರ ಸಾಧನೆಗೆ ರಾಜಕೀಯ ಇಚ್ಚಾಶಕ್ತಿಯ ಅವಶ್ಯಕತೆ ಇದೆ.
9.
ಯಾವುದೇ ಒಂದು ದೇಶದ ಆರೋಗ್ಯವು ನೇರವಾಗಿ ಇತರೆ ದೇಶದ ಆರೋಗ್ಯದ ಮೇಲೆ ನೇರವಾದ ಪ್ರಭಾವ ಬೀರುವುದರಿಂದ ಎಲ್ಲ ದೇಶಗಳು ಜನರ ಉತ್ತಮ ಆರೋಗ್ಯದ ದೃಷ್ಟಿಯಿಂದ ಒಂದಾಗಿ ಸಹಯೋಗವನ್ನು, ಸೇವೆಯನ್ನು ನೀಡಬೇಕು. ಈ ಸಂದರ್ಭದಲ್ಲಿ ವಿಶ್ವದಾದ್ಯಂತ ಪ್ರಾಥಮಿಕ ಆರೋಗ್ಯ ಆರೈಕೆ ಕುರಿತಾದ ಮತ್ತಷ್ಟು ಬೆಳವಣಿಗೆ ಮತ್ತು ಕಾರ್ಯಾಚರಣೆಗೆ WHO/UNICEF ಜಂಟಿ ವರದಿಯು ಒಂದು ಸದೃಡವಾದ ಆಧಾರವಾಗಿದೆ.
10. 2000 ಇಸವಿಯ ವೇಳೆಗೆ ವಿಶ್ವದ ಎಲ್ಲ ಜನರಿಗು ಒಂದು ಉತ್ತಮ ಮಟ್ಟದ ಸ್ವೀಕಾರಾರ್ಹ ಆರೋಗ್ಯ ಮಟ್ಟವನ್ನು ನೀಡುವ ಗುರಿಯನ್ನು ಲಭ್ಯವಿರುವ ಸಂಪನ್ಮೂಲಗಳ ಸಂಪೂರ್ಣ ಮತ್ತು ಉತ್ತಮ ಬಳಕೆ ಮೂಲಕ ಸಾಧ್ಯವಿದೆ. ಆದರೆ ಈಗ ಸದರಿ ಸಂಪನ್ಮೂಲಗಳನ್ನು ಗಣನೀಯ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಸಂಘರ್ಷಗಳಿಗೆ ವಿನಿಯೋಗವಾಗುತ್ತಿದೆ. ಶಾಂತಿಯುತ ಗುರಿ ಸಾಧನೆಗೆ ಒಂದು ಪ್ರಾಮಾಣಿಕ, ಅರ್ಥಪೂರ್ಣ, ಸ್ವಾತ್ರಂತ್ರ್ಯವುಳ್ಳ, ಶಾಂತಿಯುತ, ಬಂದಿಸುವ, ನಿಶ್ಯಸ್ತ್ರೀಕರಣದ ಅವಶ್ಯಕತೆ ಇರುತ್ತದೆ. ಇದರಿಂದ ಹೆಚ್ಚುವರಿಯಾಗಿ ಸಂಪನ್ಮೂಲಗಳು ಬಳಕೆ ಲಭ್ಯವಾಗುತ್ತವೆ. ಹಾಗೂ ಪ್ರಾಥಮಿಕ ಆರೋಗ್ಯ ಆರೈಕೆಯನ್ನು ಅಭಿವೃದ್ದಿಯ ಕೇಂದ್ರ ಭಾಗವಾಗಿರಿಸಿಕೊಂಡು ಇದಕ್ಕೆ ಸರಿಯಾದ ಪ್ರಮಾಣದಲ್ಲಿ ಸಂಪನ್ಮೂಲಗಳ ಹಂಚಿಕೆಯನ್ನು ಮಾಡಿ ಸಾಮಾಜಿಕ, ಆರ್ಥೀಕ ಅಭಿವೃದ್ದಿಯ ವೇಗವನ್ನು ವರ್ಧಿಸಬೇಕಾಗಿದೆ.
ಪ್ರಾಥಮಿಕ ಆರೋಗ್ಯ ಆರೈಕೆ ಕುರಿತಾದ ಅಂತರರಾಷ್ಟ್ರೀಯ ಸಮ್ಮೇಳನವು ತುರ್ತಾದ ಮತ್ತು ಪರಿಣಾಮಕಾರಿಯಾದ ಕ್ರಮವನ್ನು ಅಭಿವೃದ್ದಿ ಪಡಿಸಲು ಮತ್ತು ವಿಶ್ವಾದಾದ್ಯಂತ ಅನುಷ್ಠಾನ ಮಾಡಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರಮಕ್ಕೆ ಕರೆ ನೀಡುತ್ತದೆ. ಸರ್ಕಾರಗಳನ್ನು, WHO/UNICEF ಮತ್ತು ಇತರೆ ಅಂತರ ರಾಷ್ಟ್ರೀಯ ಸಂಘ ಸಂಸ್ಥೆಗಳನ್ನು, ಬಹು ಪಕ್ಷೀಯ ಹಾಗೂ ದ್ವಿಪಕ್ಷೀಯ ಸಂಸ್ಥೆಗಳನ್ನು, ಸರ್ಕಾರೇತರ ಸಂಸ್ಥೆಗಳನ್ನು, ಹಣಕಾಸು ನೆರವು ನೀಡುವ ಸಂಸ್ಥೆಗಳನ್ನು ಮತ್ತು ವಿಶ್ವದ ಎಲ್ಲ ಆರೋಗ್ಯ ಕಾರ್ಯಕರ್ತರನ್ನು ಮತ್ತು ವಿಶ್ವ ಸಮುದಾಯದ ಬೆಂಬಲವನ್ನು ಹೊಸದಾದ ಅಂತರರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ಅನುಸಾರ ವಿಶೇಷವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶಗಳಿಗೆ ಈ ನಿಟ್ಟಿನಲ್ಲಿ ತಾಂತ್ರಿಕ, ಹಣಕಾಸು ನೆರವು ನೀಡುವಲ್ಲಿ ಬೆಂಬಲಿಸಬೇಕು ಎಂದು ಈ ಸಮ್ಮೇಳನವು ಕರೆ ನೀಡುತ್ತದೆ. ಈ ಸಮ್ಮೇಳನವು ಮೇಲ್ಕಾಣಿಸಿದ ಎಲ್ಲರಿಗು, ಪ್ರಾಥಮಿಕ ಆರೋಗ್ಯ ಆರೈಕೆಯನ್ನು ಈ ಘೋಷಣೆಯ ಸ್ಪೂರ್ತಿ ಹಾಗೂ ವಿಷಯದ ಆಧಾರದಲ್ಲಿ ಪರಿಚಯ, ಅಭಿವೃದ್ದಿ, ನಿರ್ವಹಣೆ, ಪೋಷಣೆ ಸಹಯೋಗ ನೀಡಲು ಕರೆ ನೀಡುತ್ತದೆ.
ಕನ್ನಡಕ್ಕೆ ಅನುವಾದ:
ಶ್ರೀ.ಮಲ್ಲಿಕಾರ್ಜುನಯ್ಯ
ನಾಗೇಂದ್ರಮೂರ್ತಿ ಸಮತಳ
Comments